  ಮೂಲದೊಡನೆ ಪರಿಶೀಲಿಸಿ

ಕಿಟೆಲ್, ಫರ್ಡಿನಾಂಡ್

 ಕನ್ನಡಕ್ಕೆ ಶಾಶ್ವತ ಸ್ವರೂಪದ ಬೃಹತ್ ಶಬ್ದಕೋಶವನ್ನು ಒದಗಿಸಿದವರೂ, ಹಳೆಗನ್ನಡ ಕೃತಿಗಳ ಗ್ರಂಥಸಂಪಾದನೆಗೆ ತಳಹದಿ ಹಾಕಿದವರೂ, ಸ್ವಯಂ ಕವಿಯೂ ಆಗಿದ್ದ ಫರ್ಡಿನಾಂಡ್ ಕಿಟೆಲ್ 1832ರಲ್ಲಿ ಜನಿಸಿದರು. ಜರ್ಮನಿಯ ರಾಸ್ಟರ್‍ಹಾಫ್ ಎಂಬುದು ಅವರ ಹುಟ್ಟೂರು. ಮಿಶನರಿ ಯಾಗ ಬಯಸಿ ಬಾಸನ್‍ನಲ್ಲಿ ಅದರ ತರಬೇತಿಯನ್ನು ಪಡೆದು 1853ರಲ್ಲಿ ಕರ್ನಾಟಕಕ್ಕೆ ಆಗಮಿಸಿದರು. ಮಂಗಳೂರು, ಧಾರವಾಡ-ಇವುಗಳಿಗಿಂತ ಮಡಿಕೇರಿಯಲ್ಲೇ ಹೆಚ್ಚು ಸಮಯವನ್ನು ಕಳೆದರು. ಪ್ರಕೃತಿಯ ಅಸ್ವಸ್ಥತೆಯಿಂದಾಗಿ 1863ರಲ್ಲಿ, ಅನಂತರ ಕೋಶದ ಕೆಲಸಕ್ಕಾಗಿ 1877ರಲ್ಲಿ ಸ್ವದೇಶದಲ್ಲಿಯೇ ಕೆಲವರ್ಷಗಳನ್ನು ಕಳೆಯಬೇಕಾಗಿ ಬಂದಿತು.

 ಇಲ್ಲಿ ಇದ್ದಾಗ ಇತರ ಬಾಸೆಲ್ ಮಿಶನರಿಗಳಂತೆ ಕ್ರೈಸ್ತ ಮತ ಪ್ರಚಾರದಲ್ಲಿ ತೊಡಗಬೇಕಿತ್ತು. ಇದರಲ್ಲಿ ಅವರು ಅಯಶಸ್ವಿ. ಅವರ ಒಲವು ಹಳಗನ್ನಡ ಕಾವ್ಯಗಳ ಅಭ್ಯಾಸ, ಭಾರತೀಯ ತತ್ವಜ್ಞಾನ ಮತ್ತು ದ್ರಾವಿಡ ಭಾಷಾಧ್ಯಯನಗಳ ಕಡೆಗಿತ್ತು. ಸ್ವಯಂ ಅಭ್ಯಸಿಸಿದರು. ಅವರದು ಅತ್ಯಂತ ಕುಶಾಗ್ರ ಬುದ್ಧಿ ಮತ್ತು ಅಗಾಧ ನೆನಪಿನ ಶಕ್ತಿ. ಬಲುಬೇಗ ಈ ವಿಷಯಗಳಲ್ಲಿ ಪರಿಣತಿ-ಹೊಂದಿದರು.

 ಸುರುವಿಗೆ ಅವರು ಜರ್ಮನ್ ಭಾಷೆಯಲ್ಲಿದ್ದ ಕ್ರೈಸ್ತಗೀತೆಗಳನ್ನು ಕನ್ನಡಕ್ಕೆ ಅನುವಾದಿಸಿದರು. 'ಪರಮಾತ್ಮಜ್ಞಾನ' ಎಂಬ ಗ್ರಂಥವನ್ನು ಬರೆದರು. ಅದ್ವೈತ ತತ್ವಗಳನ್ನು ಖಂಡಿಸಿ ಕ್ರೈಸ್ತ ಮತದ ಹೆಚ್ಚುಗಾರಿಕೆಯನ್ನು ತೋರಿಸುವ ವಿವೇಚನೆ ಅದಾಗಿದೆ (1863). ಅಷ್ಟು ಚಿಕ್ಕ ಗ್ರಂಥದಲ್ಲಿ ಉದಾಹರಿಸಿರುವ ಐವತ್ತಕ್ಕೂ ಮಿಕ್ಕಿದ ಸಂಸ್ಕøತ ಶಾಸ್ತ್ರಗಳ ಉಲ್ಲೇಖದಿಂದ ಅವರ ಆಳವಾದ ವ್ಯಾಸಂಗದ ಕಲ್ಪನೆ ಬರುವಂತಿದೆ. ಕ್ರೈಸ್ತ ಮತಕ್ಕೆ ಸಂಬಂಧಿಸಿದ ಅವರ ಬೃಹತ್ ಗ್ರಂಥ 'ಕ್ರೈಸ್ತ ಸಭಾಚರಿತ್ರೆ'ಯಲ್ಲಿ (1870). ಸ್ವತಂತ್ರವಾದ ವಿಷಯ ಮಂಡನೆ ಇದೆ ಸೊಗಸಾದ ಆಧುನಿಕ ಕನ್ನಡ ಭಾಷೆಯಲ್ಲಿ.

 ಅವರ ಭಾರತೀಯ ತತ್ತ್ವಜ್ಞಾನಕ್ಕೆ ಸಂಬಂಧಿಸಿದ 'ಂ ಖಿಡಿಚಿಛಿಣ oಟಿ Sಚಿಛಿಡಿiಜಿiಛಿe' (1872) ಮತ್ತು 'ಐiಟಿgಚಿಛಿuಟಣus iಟಿ Iಟಿಜieಟಿ' (1876) ಇವು ವಿದೇಶಿ ಭಾಷೆಗಳಲ್ಲಿವೆ. ಮೊದಲಿನದರಲ್ಲಿ ಯಜ್ಞ ಕ್ರಿಯೆಯು ಹೊರಗಿನ ಆರ್ಯರಿಂದ ಬಂದದ್ದು ಎಂದು ಸಿದ್ಧಪಡಿಸಿ, ನಮ್ಮಲ್ಲಿಯ 21 ಯಜ್ಞ ಕ್ರಮಗಳನ್ನು ವಿವರಿಸಿದ್ದಾರೆ. ಲಿಂಗ ವಿಚಾರವಾದರೂ ಹೊರಿಗಿನಿಂದ ನಮ್ಮಲ್ಲಿಗೆ ಬಂದದ್ದು ಎಂಬುದನ್ನು ಸಂಶೋಧನ ರೀತ್ಯಾ ವಿವೇಚಿಸಿದ್ದಾರೆ. 12ನೆಯ ಶತಮಾನದ ವೀರಶೈವರ ಲಿಂಗ ಪರಿಕಲ್ಪನೆಯನ್ನು ವಿಶೇಷವಾಗಿ ಪ್ರಸ್ತಾಪಿಸಿದ್ದಾರೆ.

 ಅದರ ದ್ರಾವಿಡ ಭಾಷಾ ವ್ಯಾಸಂಗದ ಫಲಶ್ರುತಿಯನ್ನು Iಟಿಜiಚಿಟಿ ಂಟಿಣiquಚಿಡಿಥಿ ಮತ್ತು Iಟಿಜiಚಿಟಿ ಇvಚಿಟಿgeಟiಛಿಚಿಟ ಖevieತಿ - ಈ ಪತ್ರಿಕೆಗಳಲ್ಲಿ ಅಥವಾ ಲೇಖನಗಳಲ್ಲಿ ಕಾಣಬಹುದು. ಅವುಗಳ ಆಳ ಮತ್ತು ವ್ಯಾಪ್ತಿ ಎಷ್ಟೆಂದರೆ, ಆ ವೇಳೆಗೆ ದ್ರಾವಿಡ ಭಾಷೆಯ ಬಗ್ಗೆ ಹೆಸರುವಾಸಿಯಾಗಿದ್ದ ಡಾ. ಕಾಲ್ಡ್‍ವೆಲ್ ಕಿಟೆಲ್‍ರನ್ನು ಗೌರವಪೂರ್ವಕವಾಗಿ ಉಲ್ಲೇಖಿಸಿದ್ದಾರೆ. (ಅomಠಿಚಿಡಿಚಿಣive Sಣuಜಥಿ oಡಿ ಆಡಿಚಿviಜiಚಿಟಿ ಐಚಿಟಿguಚಿges, 1875). ದ್ರಾವಿಡ; ಕನ್ನಡ ಶಬ್ದಗಳು ವಿಷಯದಲ್ಲಿ ಕಿಟೆಲ್ಲರ ಮೂಲಭೂತ ನಿಲುಮೆಯೆಂದರೆ, ಶಬ್ದಗಳ ನಿಜಸ್ವರೂಪವನ್ನು ತಿಳಿಯಬೇಕಾದರೆ ಅವುಗಳ ಮೂಲದ, ತೀರಾ ಮೂಲದ ರೂಪವನ್ನು ಕಂಡುಕೊಳ್ಳಬೇಕು ಎನ್ನುವುದಾಗಿದ್ದಿತು. ಈ ಹಿನ್ನೆಲೆಯಲ್ಲಿ ಅವರು ದ್ರಾವಿಡದಿಂದ ಸಂಸ್ಕøತಕ್ಕೆ ರೂಪಾಂತರಗೊಂಡ ಸುಮಾರು 400 ಶಬ್ದಗಳನ್ನು ಪಟ್ಟಿಮಾಡಿ, ತಮ್ಮ ನಿಘಂಟುವಿನ ಪೀಠಿಕೆಯಲ್ಲಿ ಕೊಟ್ಟಿದ್ದಾರೆ.

 ಕಿಟೆಲ್ಲರು ಅನೇಕ ಹಳಗನ್ನಡ ಕಾವ್ಯಗಳನ್ನು ಆಳವಾಗಿ ಅಭ್ಯಾಸ ಮಾಡಿದ್ದರಷ್ಟೆ. ಬಾಸಲ್ ಮಿಶನ್ನಿನವರೇ ಆದರೆ. ಮೊವ್‍ಗ್ಲಿಂಗ್ ಪ್ರಕಟಿಸಿದ್ದ (1848-50) ಏಳೆಂಟು ಕಾವ್ಯಗಳನ್ನು ಬಿಟ್ಟರೆ, ಬೇರಾವ ಕೃತಿಗಳೂ ಶುದ್ಧರೂಪದಲ್ಲಿ ಮುದ್ರಣಗೊಂಡಿರಲಿಲ್ಲ. ಕಿಟೆಲ್ಲರು ಕೇಶಿರಾಜ 'ಶಬ್ದಮಣಿ ದರ್ಪಣ'ವನ್ನೂ (1832) ನಾಗವರ್ಮನ 'ಛಂದೋಂಬುದ್ಧಿ'ಯನ್ನೂ ಶಾಸ್ತ್ರೀಯವಾಗಿ ಸಂಪಾದಿಸಿ ಪ್ರಕಟಿಸಿದರು. ಪಾಠಶುದ್ಧತೆ, ಪಾಠಾಂತರ, ಹಾಗೂ ಸೂಕ್ತ ಅಡಿಟಿಪ್ಪಣಿಗಳನ್ನು ಕೊಟ್ಟು ಈ ವಿಷಯದಲ್ಲಿ ಮಾರ್ಗದರ್ಶಕರಾದರು.

 ಕನ್ನಡಕ್ಕೆ ಸಂಬಂಧಿಸಿದ ಇನ್ನೆರಡು ಉಪಕ್ರಮಗಳೆಂದರೆ, 'ವಿಚಿತ್ರ (ಸಚಿತ್ರ) ವರ್ತಮಾನ ಸಂಗ್ರಹ' ಎಂಬ ಪಕ್ಷ ಪತ್ರಿಕೆಯನ್ನೂ (1862) 'ಕನ್ನಡ ಪಂಚತಂತ್ರ' ಹಾಗೂ 'ಕನ್ನಡ ಮೂರನೆಯ ಪುಸ್ತಕ'ವನ್ನೂ ಶಾಲೆಗಳ ಉಪಯೋಗಾರ್ಥವಾಗಿ ವಿನೂತನ ರೀತಿಯಲ್ಲಿ ಸಂಪಾದಿಸಿ ಪ್ರಕಟಿಸಿದ್ದುದು. ಈ ಮೂರನೆಯ ಪುಸ್ತಕದಲ್ಲಿಯೇ (1864) ಅವರ ಕೆಲವು ಬಿಡಿ ಕವಿತೆಗಳು-ಐವತ್ತಕ್ಕೂ ಮೇಲ್ಪಟ್ಟು - ಸ್ವತಂತ್ರವಾಗಿ ರಚಿಸಲ್ಪಟ್ಟಿವೆ. ಆ ಮೂಲಕ ಹೊಸಗನ್ನಡ ಸ್ವತಂತ್ರ ಕವಿತಾರಚನೆಯ ಆದ್ಯಪ್ರವರ್ತಕರೆನಿಸಿದ್ದಾರೆ. ದೇಶ ವಿದೇಶ, ನಿಸರ್ಗ, ಪ್ರಾಣಿ ಜೀವಿಗಳು, ಜೀವನ ವಿಕಾಸ ಮುಂತಾದ ಆಧುನಿಕವೆನಿಸುವ ಲೌಕಿಕ ವಿಷಯಗಳು ಇವುಗಳಲ್ಲಿ ಅಡಕವಾಗಿದೆ.

 ಕವನಿಸುವಿಕೆ ಅವರ ಸಹಜ ಪ್ರಕೃತಿ ಎಂದೇ ಹೇಳಬೇಕು. ಕನ್ನಡ ಕಲಿತ ಹೊಸತರಲ್ಲಿಯೇ ಯೇಸುವಿನ ಜೀವನ ಚರಿತೆಯುಳ್ಳ ಒಂದು ಖಂಡಕಾವ್ಯವನ್ನು ರಚಿಸಿದ್ದಾರೆ (1861-62) ಷಟ್ಪದಿಯಲ್ಲದೆ ದಾಸರ ಹಾಡುಗಳ ಕೀರ್ತನ ರೂಪವಾಗಿಯೂ ಇಲ್ಲಿಯ ಕವಿತೆಗಳಿವೆ. ಹೊಸಗನ್ನಡದಲ್ಲಿಯ ಆದ್ಯ ಖಂಡ ಕಾವ್ಯವಿದು. ಕನ್ನಡ ಕವಿತೆಯ ಬಗ್ಗೆ ಅವರಿಗಿದ್ದ ಒಲವಿಗೆ ನಿದರ್ಶನವಾಗಿ ಟೀಕೆ-ಸಾರಾಂಶಗಳೊಡನೆ ಪ್ರಕಟಿಸಿದ ಅವರ ಎರಡು ಸಂಗ್ರಹಗಳನ್ನೂ ಇಲ್ಲಿ ಕಾಣಿಸಬೇಕು. (ಕಾವ್ಯಮಂಜರಿ-1877 ಮತ್ತು ಕರ್ನಾಟಕ ಕಾವ್ಯಮಾಲೆ 1874)

 ಅವರ ಕನ್ನಡ ನಿಘಂಟು ಇಂಗ್ಲಿಷ್‍ನಲ್ಲಿ ಕೊಟ್ಟ ಅರ್ಥಕ್ಕೆ ಮಾತ್ರ ವಿಕಾಸವಾದದ್ದಲ್ಲ. ಅದರಲ್ಲಿಯ ಪ್ರತಿಶಬ್ದ ಮೂಲರೂಪ, ದ್ರಾವಿಡ ಭಾಷೆಗಳಲ್ಲಿಯ ಜ್ಞಾತಿ ಪದಗಳು, ಹಳೆಗನ್ನಡದಲ್ಲಿ ಅವುಗಳ ಬಳಕೆ, ಜೊತೆಗೆ ಆ ಶಬ್ದವನ್ನೊಳಗೊಂಡ ಗಾದೆಗಳು-ಏನೆಲ್ಲ ಅಂಶಗಳಿಂದ ಕೂಡಿದ್ದಿದೆ. ಹೀಗೆ ಅದು ನಾಡಿನ ಸಾಮಾಜಿಕ ಕೋಶವೂ ಆಗಿದೆ. ಸುಮಾರು 70 ಸಾವಿರ ಶಬ್ದಗಳು ಪ್ರಾಮಾಣ್ಯತೆಯನ್ನು ಪ್ರಶ್ನಿಸಬೇಕಾದ್ದಿಲ್ಲ-ಎಂಬ ಭಾವನೆ ಕೊಡುತ್ತದೆ. ಈ ಕೋಶದಿಂದಾಗಿ ಕನ್ನಡ ಭಾಷೆಗೆ ಅಖಿಲಭಾರತ ಮನ್ನಣೆ ದೊರಕಿತು. ಹೊರಗಿನ ಟ್ಯೂಬಿಂಗೆನ್ ವಿಶ್ವವಿದ್ಯಾಲಯವು ಈ ಕೃತಿಗಾಗಿ ಅವರಿಗೆ ಡಾಕ್ಟರೇಟ್ ಪದವಿಯನ್ನಿತ್ತಿತ್ತು. (1896). 

 ಕಿಟೆಲ್ಲರ ಕೊನೆಯ ಕೃತಿಯಾದ, ಂ ಉಡಿಚಿmmಚಿಡಿ oಜಿ ಣhe ಏಚಿಟಿಟಿಚಿಜಚಿ ಐಚಿಟಿguಚಿge' ಎಂಬುದರಲ್ಲಿ ಕನ್ನಡ ಭಾಷೆಯ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಈ ಮೂರೂ ಅವಸಾಂತರಗಳನ್ನು ಉದಾಹರಣೆ ಸಹಿತ ವಿವರಿಸಲಾಗಿದೆ. ಅದು ಮುದ್ರಣಗೊಂಡು ಅವರ ಕೈ ಸೇರಿದ ಕೆಲ ದಿನಗಳಲ್ಲಿ ಅನಂತರ ತೀರಿಕೊಂಡರು (1903). ಹೀಗೆ ಕಿಟೆಲ್ ಕನ್ನಡಕ್ಕೆ ಸಲ್ಲಿಸಿದ ಸೇವೆ ಅನನ್ವಿತವಾದದ್ದು; ಶಾಶ್ವತ ಸ್ವರೂಪದ್ದು. 

(ಪರಿಷ್ಕರಣೆ: ಡಾ|| ಶ್ರೀನಿವಾಸ ಹಾವನೂರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ